Tuesday, February 12, 2008

ಡಾ ತಾಳ್ತಜಿ ವಸಂತಕುಮಾರ್
ಶುಭಾಶಯ
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಲಲಿತ ಪ್ರಬಂಧಗಳಿಗೆ ವಿಶಿಷ್ಟವಾದ ಪರಂಪರೆಯಿದೆ. ತೆಳುವಾದ, ತಿಳಿಯಾದ ಹಾಸ್ಯದ ಮೆಲುನಡೆ, ಯಾರನ್ನೂ ನೋಯಿಸದ ಮಾರ್ದವತೆ, ಬದುಕಿನೊಂದಿಗಿನ ಆಪ್ತ ನೆಂಟಸ್ತನಕ್ಕಷ್ಟೇ ಸಾಧ್ಯವಾಗಬಲ್ಲ ಅನೌಪಚಾರಿಕ ಮನೋಭಾವಗಳಿಗೆ ಇವು ಋಣಿಗಳಾಗಿರುತ್ತವೆ. ಈ ಪದರಗಳಾಳದಲ್ಲೆಲ್ಲೋ ಸೂಕ್ಷ್ಮವಾದ ತೀವ್ರವಾದ ಸಂವೇದನಾಶೀಲ ಮನಸ್ಸುಗಳನ್ನೆಷ್ಟೇ ಸ್ಪಶರ್ಿಸಬಲ್ಲ ಚಿಂತನಾಂಶಗಳ ಛಾಯೆಯೂ ಕಾಣಿಸಿಕೊಳ್ಳುವ ಸಂದರ್ಭಗಳಿಲ್ಲದಿಲ್ಲ. ಈ ಪ್ರಕಾರವನ್ನು ಸಮೃದ್ಧಗೊಳಿಸಿದ ಹಿರಿಯ ಸಾಹಿತಿಗಳ ಮಾಲಿಕೆಯಲ್ಲಿ ವಿ.ಸೀತಾರಾಮಯ್ಯ, ತೀ.ನಂ.ಶ್ರೀಕಂಠಯ್ಯ, ವಿ.ಎನ್.ಮೂತರ್ಿರಾವ್, ಲಾಂಗೂಲಾಚಾರ್ಯ ಮುಂತಾದವರು ಸೇರುತ್ತಾರೆ. ಅನೇಕ ಸಮಕಾಲೀನ ಬರಹಗಾರರೂ ಈ ರಂಗದ ಕೃಷಿಯಲ್ಲಿ ಪ್ರವೃತ್ತರಾಗಿದ್ದಾರೆ.
ಒಂದು ಮಗ್ಗುಲಿನಿಂದ ನೋಡಿದರೆ ಶ್ರೀಮತಿ ವನಜಾ ರಾಜನ್ ಅವರ ಹಾಸ್ಯ ಹರಟೆಗಳು ಮತ್ತು ಇನ್ನಿತರ ಲಘು ಬರಹಗಳ ಹೂಮಾಲೆ, ಈ ವರ್ಗಕಕೆ ಸೇರುವ ಕೃತಿಯಾಗಿ ಕಂಡು ಬರುತ್ತದೆ. ವಾಸ್ತವವಾಗಿ ಇದು ಒಂದೇ ಮೂಲದ್ರವ್ಯವನ್ನು ಆಶ್ರಯಿಸಿದ ಪದಾರ್ಥವಾಗಿರದೆ, ಹಲವು ಸ್ವಾಧಿಷ್ಟ ಪರಿಕರಗಳ ಸಮ್ಮಿಶ್ರಣವಾಗಿರುವ ಅವಿಯಲ್ ಮಾದರಿಗೆ ಹತ್ತಿರದ್ದಾಗಿರುತ್ತದೆ. ಹಲವು ಹರಟೆಗಳು ಸ್ವಲ್ಪ ಗಂಭೀರ ಗದ್ಯ ಬರಹಗಳತ್ತ ವಾಲುವ ಲೇಖನಗಳು, ಒಂದು ಶ್ರದ್ಧಾಂಜಲಿ ಸೂಚಕ ಬರಹ ಹಾಗೂ ಒಂದು ಕವನವನ್ನು ಸೇರಿಸಿದ, ಬೇರೆ ಬೇರೆ ಬಣ್ಣ, ಪರಿಮಳ, ರೂಪ, ಪರಿಮಾಣಗಳ ಹೂಗಳನ್ನು ಕೊಯ್ದು ಈ ಮಾಲೆಯನ್ನು ಸಿದ್ಧಪಡಿಸಿ ನಮ್ಮ ಕೈಗಿತ್ತಿದ್ದಾರೆ ಲೇಖಕಿ. ಪ್ರೀತಿಯಿಂದ ಇದನ್ನೆತ್ತಿಕೊಂಡು ಆಘ್ರಾಣಿಸಿ, ವಿವಿಧ ಕೋನಗಳಿಂದ ನೋಡಿ ಆನಂದಿಸುವುದಷ್ಟೇ ನಮ್ಮ ಕೆಲಸವಾಗಿದೆ.
ಶ್ರೀಮತಿ ವನಜಾ ಅವರ ಬರಹಗಳಲ್ಲಿ ಲಘು ದಾಟಿಗಿಂತ ವೈಚಾರಿಕ ಪ್ರಜ್ಞೆಯೇ ಪ್ರಧಾನವಾಗಿ ಕಾಣುತ್ತದೆ. ಕೊಂಬೆಗಳ ಮೇಲೆ ಕುಳಿತು ಹಾಡುತ್ತಿದ್ದ ಕೋಗಿಲೆ (ಪು 16) ಯ ಸ್ಥಾನಚ್ಯುತಿ ಅವರ ಸಂವೇದನೆಯ ವಸ್ತುವಾಗುತ್ತದೆ. ಅವರು ತಮ್ಮ ಬಾಳನ್ನು ಸಂಪದ್ಭರಿತವಾಗಿ ಮಾಡಿಕೊಳ್ಳಲು ಅವರು ಬಳಸಿಕೊಳ್ಳದ ಮಾಧ್ಯಮವೇ ಇಲ್ಲ (ಪು 23-4) ಎಂದು ಶಿವರಾಮ ಕಾರಂತರ ಇಡಿಯ ಬದುಕಿನ ಸಾಧನೆಯ ಕ್ರಮವನ್ನು ಗ್ರಹಿಸುತ್ತಾರೆ.
ಜೀವನ ಸಂಗೀತದಲ್ಲಿಯೂ ಸಪ್ತಸ್ವರಗಳ ಆರೋಹಣ - ಅವರೋಹಣವಿದೆ (ಪುಟ 23) ಎಂದು ಬದುಕಿನ ಲಯಕ್ಕೆ ಕಲಾತ್ಮಕ ಚೌಕಟ್ಟನ್ನು ಅವರು ಕಟ್ಟುತ್ತಾರೆ. ರೋಗಗ್ರಸ್ತ ಮೈ-ಮನಸ್ಸುಗಳಿಗೆ ಸಾಂತ್ವನ ನೀಡುವ ಮೃದು-ಮಧುರ ಮಾತುಗಳೆರಡೇ (ಪು 61) ದಿವ್ಯೌಷಧಗಳಾಗಬಹುದೆಂಬ ತಿಳಿವಿನ ನೆಲೆಯನ್ನು ಅವರು ಕಾಣುತ್ತಾರೆ, ಕಾಣಿಸುತ್ತಾರೆ.
ಶ್ರೀಮತಿ ವನಜಾ ಅವರ ಸಾಹಿತ್ಯಿಕ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಾ ಬಂದಿರುವ ನನಗೆ ಅವರು ನಿಧಾನಕ್ಕೆ ತಮ್ಮ ಮಾಧ್ಯಮವನ್ನು ಗುರುತಿಸಿಕೊಳ್ಳುತ್ತಿದ್ದಾರೆನ್ನುವ ತೃಪ್ತಿಯಿದೆ. ಬೆಳೆಯಿಂದ ಬೆಳೆಗೆ ಕೈಪಳಗುತ್ತ ನಡೆಯುವುದು, ಗುಣಮಟ್ಟ ಸುಧಾರಿಸುವುದು, ಇಳುವರಿಯ ಸಾರ್ಥಕ್ಯದ ಅನುಭವ ದಟ್ಟವಾಗುವುದು ನಿಸರ್ಗದ ನಿಯಮವೇ ತಾನೇ ?
ಇದೀಗ ಬೆಳಕು ಕಾಣುತ್ತಿರುವ ಕೃತಿಗೆ, ಕೃತಿಕತರ್ೃವಿಗೆ ಎಲ್ಲ ಶುಭಗಳಿರಲೆಂಬ ಹಾರೈಕೆಗಳೊಂದಿಗೆ,
ಡಾ ತಾಳ್ತಜೆ ವಸಂತಕುಮಾರ್ಕನ್ನಡ ವಿಭಾಗ,ಮುಂಬೈ ವಿಶ್ವವಿದ್ಯಾನಿಲಯವಿದ್ಯಾನಗರಿ, ಸಾಂತಾ ಕ್ರೂಸ್ (ಪೂರ್ವ)ಮುಂಬೈ - 400 098.

No comments: