Wednesday, March 12, 2008

ಹಾಸ್ಯ ಹರಟೆಗಳು ಮತ್ತು ಇನ್ನಿತರ ಲಘು ಬರಹಗಳ ಹೂ-ಮಾಲೆ
ಲೇಖಕಿಶ್ರೀಮತಿ ವನಜಾ ರಾಜನ್
ಹಲ್ಲು.......(ಒಂದು ಹರಟೆ) ಇದೆಂತಹ ಹರಟೆ ? ವಿಚಿತ್ರ ಎಂದೇ ನಿಮ್ಮವಾದವೇನು ? ಅಥವಾ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿರುವ ಹೊಸ `ಟೂತ್ಪೇಸ್ಟ್'ನ ಜಾಹೀರಾತು ಇದಾಗಿರಬಹುದೆಂದು ನಿಮ್ಮ ಮನಸ್ಸಿನಲ್ಲಿ ಸಂಶಯ ಬಂದಿರಬಹುದೇ ? ಛೇ...... ಛೇ..... ಅದ್ಯಾವುದೂ ಅಲ್ಲ ! ನಿಮ್ಮ ವಾದ-ಸಂದೇಹ-ಸಂಶಯ ಎಲ್ಲವೂ ಆಧಾರರಹಿತವಾದದ್ದು. ನೋಡಿ ! ಈ ಹಲ್ಲುಗಳು ಅದರಲ್ಲಿಯೂ ಹೊಳಪಾದ, ಬೆಳ್ಳಗೆ ಮುತ್ತು ಪೋಣಿಸಿದಂತೆ, ದಾಳಿಂಬೆ ಬೀಜದಂತೆ, ಒತ್ತಾಗಿರುವ ಹಲ್ಲಿನ ಸಾಲು, (ಲಲಿತಾ ಅಷ್ಟೋತ್ತರದಲ್ಲಿ ದೇವಿಯ ರೂಪು-ಲಾವಣ್ಯ ವರ್ಣನೆಯಲ್ಲಿ, ದಾಡಿಮಿಬೀಜರದನಾಯೈ ನಮಃ ಎಂಬುದಾಗಿದೆ). ಒಬ್ಬ ವ್ಯಕ್ತಿಯ `ಹೂ-ನಗೆ', `ಕಿರುನಗೆ', `ಮುಗುಳ್-ನಗೆ', `ನಸು-ನಗೆ', ಗೆ (ಯಾವುದೇ ನಮೂನೆಯ ನಗೆಗಾದರೂ ಸರಿ) ಕಳೆ ನೀಡುತ್ತದೆ. ಅದೇ ಸೊಟ್ಟ - ಸೊಟ್ಟಾದ, ವಕ್ರವಾಗಿರುವ ಬಾಯಿಯೊಳಗಿಂದ ಹೊರಗಡೆ ಇಣಿಕಿ ನೋಡುವ, ಕಪ್ಪು ಹಳದಿ ಬಣ್ಣದ ರಂಗು-ರಂಗಿನ ಹಲ್ಲುಗಳನ್ನು ಹೊಂದಿರುವವರು, ನಗಬೇಕಾದಾಗ, ಬಾಯಿ ಮುಚ್ಚಿಕೊಂಡು ನಗುವುದೇ ಲೇಸು - `ಬಾಯಿ ಬಿಟ್ರೆ ಬಂಡಗೇಡು' ಅಂತ ಅನ್ನಿಸಿಕೊಳ್ಳೊದಾದ್ರು ಏತಕ್ಕೆ ? ಅಲ್ಲವೇ ? ಈ ಹಲ್ಲುಗಳು ನಮ್ಮ ಬಾಯಿಯಲ್ಲಿ ಹುಟ್ಟುವಾಗಲೇ, ಅನೇಕ, ತೊಂದರೆಗಳು, ಸಂಗಡವೇ ಹುಟ್ಟಿಕೊಳ್ಳುತ್ತವೆ. ಮನೆಯಲ್ಲಿ ಅಜ್ಜಿ-ಅಮ್ಮ ಹೇಳೋದು ಕೇಳಿಲ್ವೇ ? ಪಾಪ ! ಮಗುವಿನ ಮೈಯ್ಯೆಲ್ಲ ಬಿಸಿ ಬಿಸಿಯಾಗಿದೆ, ಬಹಳ ಭೇದಿಯಾಗ್ತಿದೆ, ಮಗುವಿಗೆ 5-6 ತಿಂಗಳಾಯ್ತು `ಹಲ್ಲು' ಬರುತ್ತಿದೆ ಅಂತ ಕಾಣ್ತಿದೆ. ಮನುಷ್ಯ ತನ್ನ ಜೀವಮಾನದಲ್ಲಿ ಒಮ್ಮೆಯಾದರೂ `ಹಲ್ಲು' ನೋವು ಅನುಭವಿಸದೇ ಇರಲು ಸಾಧ್ಯವೇ ಇಲ್ಲ. ವರ್ಷಗಳು ಉರುಳಿದಂತೆ `ಹಲ್ಲು'ಗಳು ಹೊಳಪನ್ನು ಕಳೆದುಕೊಂಡು, ಸವೆಯುತ್ತವೆ. ವಸಡುಗಳು ಉಬ್ಬಿಕೊಳ್ಲುತ್ತವೆ. ಕುಳಿಗಳು ಕಂಡು ಬರುತ್ತವೆ. ಇವೆಲ್ಲಾ ತೊಂದರೆಗಳು, ಒಂದು ವೇಳೆ, ಒಬ್ಬ ವ್ಯಕ್ತಿಯನ್ನು ಬಾಧಿಸಲಿಲ್ಲವೆಂದು ಭಾವಿಸೋಣ ! ಆದರೆ, ದವಡೆಯ ಕೊನೆಯಲ್ಲಿ ವಿವೇಕ-ವಿವೇಚನೆಯ (?) (wisdom) `ಹಲ್ಲು' ಹುಟ್ಟಿ ಸಹಿಸಲಸಾಧ್ಯವಾದ ನೋವಿನಿಂದ ದಂತ ವೈದ್ಯರ ಬಳಿ ಧಾವಿಸಿ ಬರಲೇ ಬೇಕಾದ ಪ್ರಸಂಗಗಳನ್ನು ನಾವು ಕಂಡಿದ್ದೇವೆ. ಬಹಳಷ್ಟು ಕೇಳಿಯೂ ಇದ್ದೇವೆ. ಆಂಗ್ಲ ಭಾಷೆಯ ಶ್ರೇಷ್ಠ ನಾಟಕಕಾರ, ಶೇಕ್ಸ್ಪಿಯರ್, (ಹಲ್ಲು ನೋವಿನಿಂದ ನರಳಿರಬೇಕು) ಒಮ್ಮೆ ಈ ಬಗ್ಗೆ ವ್ಯಾಖ್ಯೆ ಮಾಡುತ್ತಾ ಹೇಳಿದ್ದಾನೆ - `ಹಲ್ಲು ನೋವಿನಂತಹ ತೀವ್ರತರ ನೋವನ್ನು ತಾಳ್ಮೆಯಿಂದ ಅನುಭವಿಸಲು ಯಾವ ತತ್ವಜ್ಞಾನಿಗೂ ಕೂಡ ಸಾಧ್ಯವಿಲ್ಲ', (for there was never a philosopher who could endure the tooth ache). ಈ `ಹಲ್ಲು'ಗಳು ನಮ್ಮ ಬಾಯಿಯಿಂದ ಬೇರ್ಪಟ್ಟು, ಬೀಳುವಾಗಲೂ ಅಷ್ಟೇ ಕಷ್ಟ ಅನ್ನಿ ! ಸಾಮಾನ್ಯವಾಗಿ ನಾವು ಮಕ್ಕಳನ್ನು ಗದರಿಸುವಾಗ, ಏ ! ನೋಡು, ಹೆಚ್ಚು ಮಾತನಾಡಿದ್ರೆ `ಹಲ್ಲು' ಉದುರಿಸಿಬಿಡ್ತೇನೆ, ಅಂತ ಹೇಳ್ತೆವೆ. ಹಲ್ಲು ಉದುರಿಸೋದು ಅಷ್ಟು ಸುಲಭದ ಕೆಲಸ ಅಲ್ಲ ಅಂತ ಅವರಿಗೂ ತಿಳಿದಿರಬಹುದು, ನಮಗಂತೂ ಚೆನ್ನಾಗಿ ತಿಳಿದಿದೆ - ದಂತವೈದ್ಯರ ಬಳಿಹೋಗಿ, ಭಯಂಕರ ನೋವು ಅನುಭವಿಸಿ, ಹಣವನ್ನೂ ಕೊಟ್ಟು ಹಲ್ಲು ಕೀಳಿಸಿ ಬರಬೇಕಾಗಿದೆ. ಈಗ್ಗೆ ಎರಡು ಮೂರು ತಿಂಗಳ ಹಿಂದೆ ಒಂದು ಸ್ವಾರಸ್ಯವಾದ ವಿಷಯವನ್ನು ವೃತ್ತ ಪತ್ರಿಕೆಯಲ್ಲಿ ಓದಿದೆನು. ಅಮೇರಿಕದ ಲಾಸ್ ಏಂಜಲೀಸ್ ನಗರದ ನ್ಯಾಯಾಲಯ ಶ್ರೀಮತಿ ಲಿಂಡಜೆಪ್ರಿ ಎಂಬ ಮಹಿಳೆಗೆ 1.1 ಮಿಲಿಯನ್ ಡಾಲರುಗಳನ್ನು (ಸುಮಾರು ನಾಲ್ಕು ಕೋಟಿ ರೂಪಾಯಿಗಳು) ನೀಡಲು, ಅವಳ ದಂತ ವೈದ್ಯರಿಗೆ ಆದೇಶಿಸಿತು. ಕಾರಣ ಏನೆಂದರೆ, ಅವಳ ಲಿಖಿತ ಅನುಮತಿ ಇಲ್ಲದೆಯೇ ಇಪ್ಪತ್ತೊಂದು ಹಲ್ಲುಗಳನ್ನು ಕಿತ್ತು ಬಾಯಿ ಬರಿದು ಮಾಡಿದುದಕ್ಕಾಗಿ ಅವಳ ದಂತ ವೈದ್ಯರು ದಂಡ ತೆರಬೇಕಾಯಿತು. ಹಿಂದೆ ದ್ವಾಪರ ಯುಗದಲ್ಲಿ ಬೆಣ್ಣಿ ಕದ್ದನೆಂದು ಬಾಲಕೃಷ್ಣನನ್ನು ತಾಯಿ ಯಶೋದೆ, ಬಾಯಿ ತೆರೆದು ತೋರಿಸೆನ್ನಲು ಬ್ರಹ್ಮಾಂಡ ಜಗತ್ತನ್ನೇ ತನ್ನ ಪುಟ್ಟ ಬಾಯಿಯಲ್ಲಿ ತೋರಿಸಿದ ಜಗದೋದ್ಧಾರಕ ಎಂದು ಪುರಂದರದಾಸರು ಹಾಡಿ ಹೊಗಳಿದ್ದಾರೆ. ಆದರೆ, ಕಲಿಯುಗದಲ್ಲಿ, ಈ ಕಾಲದಲ್ಲಿ, ದಂತ ವೈದ್ಯರಿಗೆ ಬಾಯಿ ತೆರೆದು ತೋರಿಸಿರಿ - ಕೈಯ್ಯಲ್ಲಿ ಇಕ್ಕಳ ಹಿಡಿದು ನೋವಾಗುತ್ತಿರುವ ಹಾಗೂ ನೋವಿಲ್ಲದ `ಹಲ್ಲು' ಹಲವಾರು, ಕಿತ್ತು ಬಿಸಾಡದಿದ್ದರೆ, ಅವರಿಗೆ ಸಮಾಧಾನವೇ ಆಗುವುದಿಲ್ಲ ! ಬಾಯಿ ಬಿಟ್ಟು ನೀವು ಹೇಗೆ ನಿಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಬಲ್ಲಿರಿ ? ಆದರೂ ಧೈರ್ಯದಿಂದ ದಂತ ವೈದ್ಯರನ್ನು ನ್ಯಾಯಾಲಯದವರೆಗೆ ಕರೆದೊಯ್ದಿರಿ, ಎಂದು ಅಂದುಕೊಳ್ಳೋಣ, ಆದಂತ ವೈದ್ಯ ನ್ಯಾಯಾಲಯದ ಕಟಕಟೆಯಲ್ಲಿ ನಿಂತು ಭಗವದ್ಗೀತೆಯ ಮೇಲೆ ಕೈ ಇಟ್ಟು ನಾನು ಹಲ್ಲನ್ನು ಮಾತ್ರ, ಅದೂ ನೋವಾಗಿರುವ ಸರಿಯಾದ ಹಲ್ಲನ್ನು ಮಾತ್ರ ಯಾವಾಗಲೂ ಕೀಳುತ್ತೇನೆ, ಎಂದು ಪ್ರಮಾಣ ವಚನ ನೀಡಬಹುದೆಂದು ಭಾವಿಸೋಣವೇ ? ಶ್ರೀಮತಿ ಲಿಂಡಜೆಪ್ರಿಗೇನು ಇಪ್ಪತ್ತೊಂದು ಹಲ್ಲುಗಳನ್ನು ಕಳೆದುಕೊಂಡರೂ, ಒಂದೇನು, ಇಪ್ಪತ್ತೊಂದು ಸೆಟ್ ಹಲ್ಲುಗಳನ್ನಾದರೂ ಕಟ್ಟಿಸಿ ಹಾಕಿಕೊಳ್ಳುವಷ್ಟು ಹಣ ಕೈಸೇರಿತು. ಆದರೆ ನಮ್ಮ ಬೆಂಗಳೂರಿನ ಲಕ್ಷ್ಮಮ್ಮ ಒಂದೇ ಒಂದು ಸೆಟ್ ಹಲ್ಲಿಗಾಗಿ ಹಂಬಲಿಸಿ, ಪಡೆದುಕೊಂಡು, ನಂತರ ಕಳೆದುಕೊಂಡು, ಪುನಃ ಅವರ ಕೈ ಸೇರಿದ ಕಥೆ ಇನ್ನೂ ಸ್ವಾರಸ್ಯವಾಗಿದೆ. ಅವರು ಬಹಳ ದಿನಗಳಿಂದ `ಹಲ್ಲು' ನೋವು ಅನುಭವಿಸುತ್ತಿದ್ದರು. ಒಂದೆರಡು `ಹಲ್ಲು'ಗಳು ಆಹಾರ ಬಿಸಿ ಇರಲೀ, ತಣ್ಣಗಿರಲೀ ತಾಕಿದ ಕೂಡಲೆ ಒಳ್ಳೆ ವಿದ್ಯುತ್ ಪ್ರವಾಹ ಹರಿದಂತೆ ಜುಮ್ ಎಂದು ತಮ್ಮ ಇರುವಿಕೆಯನ್ನು ತಿಳಿಯ ಪಡಿಸುತ್ತಿತ್ತು. ಆ ಹಲ್ಲುಗಳ ಹದಿ-ಬದಿಯಲ್ಲಿರುವ `ಹಲ್ಲು'ಗಳು ಸಹ ನಮ್ಮ ತಾತನ ಕಾಲದ ಹಾರ್ಮೋನಿಯಮ್ ರೀಡ್ಸ್ ಇದ್ದಂತೆ ಜೋಕಾಲಿ ಆಡುತ್ತಿತ್ತೇ ವಿನಹ ಬಾಯಿಯಿಂದ ಹೊರಗೆ ಬರಲು ಮುಷ್ಕರವೇ ಹೂಡಿತ್ತು. ಒಂದು ದಿನ ದಂತ ವೈದ್ಯರ ದಯೆಯಿಂದ ಲಕ್ಷ್ಮಮ್ಮನಿಗೆ ಈ ಬಾಧೆಯಿಂದ ಮುಕ್ತಿ ದೊರೆಯಿತು ನಿಜ ! ಆದರೆ ವಸಡೆಲ್ಲಾ ಅತ್ಯಂತ ಮೃದುವಾಗಿ ಅವರು ಮಾತನಾಡಿದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ಮೇಲಾಗಿ ಅವರು ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳಿಗೆ ಕಲಿಸುತ್ತಿದ್ದರು. ಮಕ್ಕಳ ಪರಿಹಾಸ್ಯ, ಚಕ್ಕುಲಿ ಕೋಡುಬಳೆ ಮುಂತಾದ ಕರಿದ ಪದಾರ್ಥಗಳನ್ನು ತಿನ್ನುವ ಚಪಲ ಬೇರೆ ಕೊನೆಗೂ ಮನಸ್ಸು ಗಟ್ಟಿ ಮಾಡಿ ಹಲ್ಲು ಕಟ್ಟಿಸಿಕೊಂಡೇ ಬಿಟ್ಟರು. ಅದನ್ನು ಬಾಯಿಯೊಳಗೆ ಇಟ್ಟುಕೊಂಡ ಹೊಸದು ! ಅದರಿಂದಾಗಿ ಅವರು ಪಟ್ಟ ಪಾಡು, ದೇವರಿಗೇ ಗೊತ್ತು ! ಆಗಾಗ ಸ್ಥಳ ಪಲ್ಲಟವಾಗಿ ಬಾಯೆಲ್ಲಾ ಚುಚ್ಚಿ, ಗಾಯವಾಗಿ, ಒಂದು ಹಂತದಲ್ಲಂತೂ, ಹಲ್ಲು ಹೊಸದಾಗಿ ಯಾಕೆತಾನೆ ಕಟ್ಟಿಸಿಕೊಂಡೆನೋ ಎಂದು ಪಶ್ಚಾತ್ತಾಪ ಪಟ್ಟದ್ದೂ ಉಂಟು. ಕೆಲವಾರು ತಿಂಗಳ ನಂತರ ಈ ಕೃತಕ ದಂತ ಪಂಕ್ತಿ ಅವರ ಬಾಯಿಗೆ ಹೊಂದಿಕೊಂಡಿತು, ಅನ್ನಿ ! ಅವರ ಅಣ್ಣನ ಮಗಳ ಮದುವೆ ತಿರುಪತಿಯಲ್ಲಿ ನಡೆಯಲಿದೆಯೆಂದು ತಿಳಿದು, ಕೂಡಲೇ ಮದುವೆಗೆ ಹೊರಡಬೇಕೆಂದು ಭರದಿಂದ ಸಿದ್ಧತೆ ನಡೆಸಿದರು. ಮದುವೆ ಮುಗಿಸಿಕೊಂಡು ಹಿಂದಿರುಗಿ ಬರುವಾಗ, ಬಸ್ನಲ್ಲಿ ಕಿಟಕಿಯ ಬಳಿ ಸ್ಥಳ ಮಾಡಿಕೊಂಡು ಕುಳಿತರು. ಬಸ್ಸಿನಲ್ಲಿ ಕಾಲಿಡಲೂ ಸ್ಥಳವಿಲ್ಲ. ಬೇಗನೇ ಬೆಂಗಳೂರು ಸೇರುವ ಕಾತುರ ಮದುವೆಮನೆಯ ಸಡಗರ-ಸಂಭ್ರಮ ಬಂದು-ಬಳಗದವರ ಪ್ರೀತಿ ವಾತ್ಸಲ್ಯದ ನುಡಿಗಳನ್ನು, ಅದರ ಸವಿ ನೆನಪನ್ನು ಮನಸ್ಸಿನಲ್ಲಿಯೇ ಮೆಲುಕು ಹಾಕುತ್ತ ಕುಳಿತ್ತಿದ್ದರು. ಇದ್ದಕ್ಕಿದ್ದಂತೆ ಹೊಟ್ಟೆಯಲ್ಲಿ ಸಂಕಟ, ತಳಮಳ, ಓಹ್ ! ಮದುವೆ ಮನೆಯಲ್ಲಿ ಚಿರೋಟಿ, ಲಾಡು, ಎಲ್ಲ ತಿಂದುದರ ಫಲವೇನೋ ಎಂದುಕೊಂಡು, ಚೀಲ ಹುಡುಕಿ, ಸ್ವಲ್ಪ ಅಡಿಗೆ ಪುಡಿ ಬಾಯಿಗೆ ಹಾಕಿಕೊಂಡರು. ಊಹೂ ! ಏನೂ ಆಗಲಿಲ್ಲ, ಸಂಕಟ ಜಾಸ್ತಿಯಾಗುತ್ತಲೇ ಹೋಯಿತು. ಬೆಳಿಗ್ಗೆ ತಿಂದ, ಬೀಗರ ಔತಣಕ್ಕಾಗಿ ಮಾಡಿದ ಭರ್ಜರಿ ಊಟದ ಸಂಗಡ, ಆಗ ತಾನೆ ತಿಂದ ಅಡಿಕೆ ಪುಡಿ ಎಲ್ಲಾ ಹೊರಕ್ಕೆ ಬಂದಿತು. ಎಲ್ಲಾ ವಾಂತಿ ಆದ ಮೇಲೆ ಹೊಟ್ಟೆ ಖಾಲಿಯಾಗಿ ಹಗುರವಾಯಿತು. ಹೊಟ್ಟೆ ಏನೋ ಹಗುರವಾಯ್ತು, ಆದರೆ ಇದೇನು ! ಬಾಯಿ ಹಗುರವಾಗಿದೆಯಲ್ಲ ಎಂದು ಮುಟ್ಟಿ ನೋಡ್ತಾರೆ, ದಂತ ಪಂಕ್ತಿ ಮಾಯ! ನನ್ನ ಹಲ್ಲು ! ಎಂದು ಚೀರಿದರು ಲಕ್ಷ್ಮಮ್ಮ, ಬಸ್ಸಿನಲ್ಲಿದ್ದ ಎಲ್ಲರ ದೃಷ್ಟಿ ಅವರ ಕಡೆ ಹರಿಯಿತು. ಏ ಡ್ರೈವರ್, ಏ ಕಂಡಕ್ಟರ್, ಸ್ವಲ್ಪ ಬಸ್ ನಿಲ್ಸಿಪ್ಪ. ನನ್ನ ಹಲ್ ಸೆಟ್ ಬಿದ್ಹೋಗಿದೆ. ಹೊಸದಪ್ಪಾ, ಎಂದು ಪಾಪ, ಅಂಗಲಾಚಿ ಬೇಡಿದರು. ಏನಮ್ಮಾ ಒಂದು ಹಲ್ಸೆಟ್ ಗೋಸ್ಕರ ಬಸ್ ನಿಲ್ಸೊಕಾಗುತ್ತೇ, ಎಂದು ಹಾಸ್ಯದಿಂದ ಮೂದಲಿಸಿದನು ಕಂಡಕ್ಟರ್. ಬಸ್ನಲ್ಲಿ ಗಿಜಿ-ಗಿಜಿ ಮಾತು, ಮೂರನೆಯ ಸೀಟಿನಲ್ಲಿ ಕುಳಿತಿದ್ದ ಶ್ರೀನಿವಾಸರಾಯರು ತಮ್ಮ ಹಲ್ಲು ಮುಟ್ಟಿ ನೋಡಿಕೊಂಡರು ಸಧ್ಯ ! ಸುರಕ್ಷಿತವಾಗಿದೆ ಎಂದು ಅಂದುಕೊಂಡರು (ಅವರದೂ ಸಹ ಕೃತಕ ಹಲ್ಲಿನ ಸೆಟ್) ಪಾಪ ! ಒಂದ್ಹತ್ ನಿಮಿಷ ನಿಲ್ಸಪ್ಪ, ಅವರು ಸೆಟ್ ತೆಗೆದುಕೊಂಡು ಬರಲಿ. ಎಂದು ಹಿಂದೆ ಕುಳಿತ್ತಿದ್ದ ಯಾರೋ ಮುದುಕರು ಲಕ್ಷ್ಮಮ್ಮನ ಪರವಾಗಿ ಮಾತನಾಡಿದರು. ಈ ಮುದುಕೀದು ಒಂದು ತರಲೆ, ಇದೇನು ವಜ್ರದ ಸೆಟ್ಟೇ ಅಥವಾ ಕೆಂಪಿನ ಸೆಟ್ಟೇ, ಎಂದು ಗೊಣಗುತ್ತಾ ಡ್ರೈವರ್ ಬಸ್ಸನ್ನು ಕೊನೆಗೂ ನಿಲ್ಲಿಸಿದನು. ಈ ಗಲಾಟೆ ವಾಗ್ವಾದದಲ್ಲಿ ಬಸ್ ಒಂದು ಫಲರ್ಾಂಗ್ ದಾಟಿ ಹೋಗಿತ್ತು. ಪಾಪ ! ಲಕ್ಷ್ಮಮ್ಮ ತಮ್ಮ ದಂತ ಪಂಕ್ತಿಯನ್ನು ಹುಡುಕುತ್ತಾ ಬೇಗ - ಬೇಗನೇ ನಡೆದು ಹೋದರು. ಅಂದು ಬೆಳಿಗ್ಗೆ ವೆಂಕಟೇಶ ಕ್ಲಾಸಿಗೆ ಹೋಗದೆ, ಹಾಗೆ ಅಡ್ಡಾಡುತ್ತಾ ಬರ್ತಾ ಇದ್ದನು. ಬಿಸಿಲಿಗೆ, ಇದೇನು, ತಳ-ತಳ ಎಂದು ಹೊಳೆಯುತ್ತಿದೆಯಲ್ಲಾ, ಎಂದುಕೊಂಡು, ಓಡಿ ಬಂದು, ಆ ದಂತ ಪಂಕ್ತಿಯನ್ನು ಕೈಯ್ಯಲ್ಲಿ ಹಿಡಿದು ನೋಡುತ್ತಿದ್ದನು. ಬಿರಬಿರನೆ ನಡೆದು ಬಂದ ಲಕ್ಷ್ಮಮ್ಮ ವೆಂಕಟೇಶನ ಕೈಯ್ಯಲ್ಲಿದ್ದ ತನ್ನ ದಂತಪಂಕ್ತಿಯನ್ನು ನೋಡಿ, ನನ್ನ ಹಲ್ಲು ! ಎಂದು ಅವನ ಕೈಯಿಂದ ಕಿತ್ತುಕೊಂಡು, ಮರು ಮಾತನಾಡದೆ, ದಾಪುಗಾಲು ಹಾಕುತ್ತಾ, ಬಸ್ಸಿನ ಕಡೆಗೆ ವೇಗವಾಗಿ ಹೊರಟರು, ವೆಂಕಟೇಶನಿಗೆ ಏನೂ ಅರ್ಥವಾಗಲೇ ಇಲ್ಲ. ಹಾಗೇ ಬೆಕ್ಕಸ ಬೆರಗಾಗಿ ನೋಡುತ್ತಾ ನಿಂತನು. ಅಬ್ಬ ! ಲಕ್ಷ್ಮಮ್ಮನಿಗಂತೂ ದೊಡ್ಡ ದಿಗ್ವಿಜಯ ಸಾಧಿಸಿದಂತಾಯಿತು ! ಈ ಹರಟೆ ಓದಿ, (ರೋಷ - ಬೇಸರದಿಂದ) ಹಲ್ಲುಗಳನ್ನು ಕಟ-ಕಟಾಂತ ಕಡಿಯಬೇಡಿರಿ, ಜಖಂ ಆದೀತು...... (ಬೆಂಗಳೂರು A.I.R. 1980) (ನವಸುಮ - 15-4-1997)

All rights reserved. No part of this article be reproduced or transmitted in any form,by any means without the prior permission of the author.

No comments: