Friday, April 11, 2008

ಒಂದು ಗೋಡೆಯ ಕಥೆ(ನೈಜ ಕಥೆ) ಅದೊಂದು ಗೋಡೆ. ಎಲ್ಲಾ ಗೋಡೆಗಳಂತೆ ಅದು ತನ್ನ ತಲೆಯ ಮೇಲೆ ತನ್ನ ಅಕ್ಕ ಪಕ್ಕದಲ್ಲಿರುವ ಇನ್ನಿತರ ಗೋಡೆಗಳ ಭಾರವನ್ನೂ, ಅಗಲವಾದ ಛಾವಣಿಯನ್ನು ಹೊತ್ತು ಆಲ್ಲಾಡದೆ ಚಿರಸ್ಥಾಯಿಯಾಗಿ ಹಿಮಾಲಯದಂತೆ, ಗಂಭೀರವಾಗಿ ನಿಂತಿದೆ. ಈ ಗೋಡೆ ಮೂರು ತಲೆಮಾರಿನ ಆಗು ಹೋಗುಗಳ ಹಿತ - ಅಹಿತ ಘಟನೆಗಳಿಗೆ ಸಾಕ್ಷಿಯಾಗಿ ಮೂಕವಾಗಿ ನಿಂತಿದೆ. ಅದು ಕಟ್ಟಲ್ಪಟ್ಟಾಗ ಪ್ರಾಯಶಃ ಕಟ್ಟಿದ ಗಾರೆಯವನಿಗಾಗಲೀ, ಕಟ್ಟಿದವನಿಗಾಗಲೀ ಇದು ಮುಂದೆ ಹೇಗೆ ಒಂದು ಮನೆಯ, ಮೂರು ತಲೆಮಾರಿನ ಚರಿತ್ರೆಯ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸುವುದೆಂದು ತಿಳಿದಿರಲಾರದು. ಅದೇನಾದರೂ ನಮ್ಮಂತೆ ಮಾತು ಬರುವ ಜೀವವಾಗಿದ್ದಿದ್ದರೆ ಏನು ಅನಾಹುತವಾಗುತ್ತಿತ್ತೊ ಏನೋ - ಕಲ್ಪನೆಗೂ ಎಟುಕುವುದಿಲ್ಲ ! ಮೊಟ್ಟ ಮೊದಲು, ಯಜಮಾನನು ಆ ಗೋಡೆ, ಅದನ್ನು ಆಧರಿಸಿರುವ ಇದೇ ರೀತಿಯ ಇನ್ನೂ ಅನೇಕ ಗೋಡೆಗಳನ್ನೊಳಗೊಂಡ ಕೋಣೆಗಳನ್ನು ಅಂದವಾಗಿ ಕಟ್ಟಿಸಿದನು. ಮನೆ ಕಳೆ-ಕಳೆಯಾಗಿ ಮೂರು ಗಂಡು ಮಕ್ಕಳು, ಸೊಸೆಯರು, ಮೊಮ್ಮಕ್ಕಳು ನಂದನವನವಾಗಿತ್ತು. ಅವನು ಪರಮಧಮರ್ಿಷ್ಠ, ದೈವಭಕ್ತಿ ಉಳ್ಳವನು ಅದೋ ಸುಭಿಕ್ಷಕಾಲ, ಮನೆಯ ಎಲ್ಲಾ ಭಾಗವೂ ಪ್ರತ್ಯೇಕವಾಗಿ, ಅನುಕೂಲವಾಗಿ, ಬಹಳ ಜನ ಆರಾಮವಾಗಿ ವಾಸಿಸಲು ಯೋಗ್ಯವಾಗಿತ್ತು. ಮದುವೆ, ಮುಂಜಿ, ಮುಂತಾದ ಸಮಾರಂಭಗಳು ನಡೆಯುತ್ತಲೇ ಇತ್ತು. ನಿಜಕ್ಕೂ ಅದು ಒಂದು ಛತ್ರವಾಗಿತ್ತು. ಅನೇಕರು ಬಂದು, ಇದ್ದು ಉಂಡು ನಲಿದು ಹೋದ ಕಾಲವೂ ಉಂಟು. ಗೋಡೆಗಳು ಸುಣ್ಣ - ಬಣ್ಣದಿಂದ, ಮೋಹಕ ಉಡುಗೆ ತೊಟ್ಟ ಸುಂದರ ಸ್ತ್ರೀಯಂತೆ ತಳ-ತಳಿಸುತ್ತಿತ್ತು. ಆ ಕಾಲವು ಕಳೆದು ಹೋಯಿತು - ಎರಡನೆಯ ತಲೆಮಾರು ಯಜಮಾನನ ಮಕ್ಕಳ ಕಾಲದಲ್ಲಿ ಮನೆಯಲ್ಲಿ ಅನೇಕ ಮಾಪರ್ಾಡುಗಳು ತಲೆದೋರಿದವು. ಮಕ್ಕಳು ಉದ್ಯೋಗಗಳ ಕಾರಣದಿಂದಾಗಿ ಪರಸ್ಥಳಗಳಿಗೆ ಹೋಗಿದ್ದರು. ಯಾರಿಗೂ ಬೇಡದ ಮನೆ, ಸುಣ್ಣ-ಬಣ್ಣ, ರಿಪೇರಿ ಯಾವುದೇ ರೀತಿಯ ಸಂಸ್ಕಾರವಿಲ್ಲದೆ ಕಳಾಹೀನವಾಯಿತು. ಕೆಲಸದಿಂದ ನಿವೃತ್ತಿಯಾಗಿ ಬಂದಮೇಲೆ ಮನ-ಮನಗಳಲ್ಲಿದ್ದ ಹೊಂದಾಣಿಕೆ ಹೋಗಿ ವಿರಸಕ್ಕೆ ಎಡಕೊಟ್ಟಿತು. ಮನೆಯನ್ನು ಮೂರು ಭಾಗವಾಗಿ ಮುರಿಯಲು ನಿಶ್ಚಯಿಸಿದರು. ನಿಶ್ಚಯವೇನೊ ಆಯಿತು. ಸುಗಮವಾಗಿ, ಸರಸವಾಗಿ ಮುಕ್ತಾಯವಾಗಬೇಕಿದ್ದ ವ್ಯವಹಾರ ಕಚ್ಚಾಟ, ಕದನಕ್ಕೆ ತಿರುಗಿತು. ಮನೆ ಮುರಿಯಿತು. ಮನಸ್ಸು ಮುರಿಯಿತು. ಈ ಗೋಡೆ ಹಿರಿಯನ ಪಾಲಿಗೆ ಬಂದಿತು. ಹಿರಿಯ ಸೊಸೆ ತುಂಬು ಜೀವಿ. ಹೃದಯ ವೈಶಾಲ್ಯದ ಜೊತೆಗೆ ಕೈಬಲು ಧಾರಾಳ. ಕೋಣೆಗಳು ಯಾವಾಗಲೂ ಅತಿಥಿ - ಆಭ್ಯಾಗತರಿಂದ ತುಂಬಿರುತ್ತಿತ್ತು. ತಾನು ಸ್ವತಃ ಕಲಿತವಳಲ್ಲದಿದ್ದರೂ ತನ್ನ ಕುಟುಂಬದ ಮಕ್ಕಳಿಗೆಲ್ಲಾ ವಿದ್ಯೆ, ಬುದ್ಧಿ ಕಲಿಸಿ ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನಮಾನಗಳನ್ನು ಇಂದು ಪಡೆಯಲು ಸಹಾಯಕಳಾದಳು. ತನ್ನ ಕುಟುಂಬಕ್ಕೆ ಒಂದು ನೆಲೆಗೊಳಿಸಲು ಸ್ಥಳ, ಮನೆಗಾಗಿ ಹೊಡೆದಾಡಿದಳು. ಕೊನೆಗೂ ಮನೆ ಇಬ್ಭಾಗವಾಯಿತು. ಈ ಗೋಡೆಯ ಬಳಿಯಲ್ಲಿ ಮತ್ತೊಂದು ಉದ್ದನೆಯ ಗೋಡೆ ಎದ್ದಿತು. ಮನೆಯ ಅಂದ, ಆನಂದ, ಅಂದೇ ಕೊನೆಯಾಯಿತು. ಅನಂತರ ಆ ಸಂಭ್ರಮ, ಉಲ್ಲಾಸ, ಮನೆಯಲ್ಲಿ ಎಂದೂ ಕಾಣಲಿಲ್ಲ. ಮಕ್ಕಳನ್ನು ಕಾಡಿಬೇಡಿ ಮನೆಯಲ್ಲಿ ವಾಸಿಸಲು ಯೋಗ್ಯವಾಗಿ ಮಾಡಲು ಪುನಃ ಮನೆಕಟ್ಟಲು ಉಪಕ್ರಮಿಸಿ, ಮುಗಿಸುವ ವೇಳೆಗೆ ಜೀವನದ ಹೋರಾಟದಲ್ಲಿ ಸೋತು, ಸೊರಗಿ, ಆ ಹಿರಿಯ ಸೊಸೆ ಕಣ್ಮುಚ್ಚಿದಳು. ಎಂದೂ ಪತಿಯ ಬೆಂಬಲವಿಲ್ಲ. ಮಕ್ಕಳ ಪ್ರೀತಿ - ಆದರವಿಲ್ಲ..... ಎಲ್ಲಾ ದೂರ. ಈ ಗೋಡೆಯ ಮೇಲೇರಿತು ಅವಳ ಭಾವಚಿತ್ರ ಗಂಧದ ಮಾಲೆಯೊಂದಿಗೆ. ಈ ಜೀವದ ಆಗಲಿಕೆಯಿಂದಾಗಿ ಅವಳ ಪತಿಗೆ ಜೀವನದ ಸಂಜೆ ಬಹು ಬೇಗ ಕತ್ತಲಾಯಿತು. ಒಂಟಿಯಾಗಿ, ಯಾರಿಗೂ ಬೇಡದವನಾಗಿ ಎಲ್ಲರಿಗೂ ಭಾರವೆನಿಸಿ ಜೀವ ಸವೆಸಿ ಕೊನೆಗೂ ಕೊನೆ ಉಸಿರೆಳೆಯಿತು, ಆ ಜೀವ. ಮರಿಗಳು ಎಷ್ಟಿದ್ದರೂ ತಾಯಿ ಹಕ್ಕಿ ಅವುಗಳನ್ನು ಜೋಪಾನಮಾಡಿ ಹಾರುವುದನ್ನು ಕಲಿಸಿ ಕಾಪಾಡುತ್ತದೆ. ರೆಕ್ಕೆ ಬಲಿತ ಮೇಲೆ ಮರಿಹಕ್ಕಿಗಳಿಗೆ ತಾಯಿ ಹಕ್ಕಿಯ ಹಂಗು ಬೇಡ. ಒಂದು ಬೃಹತ್ ವೃಕ್ಷಕ್ಕೆ ರೆಂಬೆ, ಹೂ, ಕಾಯಿ, ಹಣ್ಣು ಯಾವುದೂ ಭಾರವಲ್ಲ. ಐದು ಮಕ್ಕಳಿಗೆ ಒಬ್ಬ ಮುದಿತಂದೆ ಭಾರವಾಯಿತು. ಆ ಜೀವ ಆಗಲಿಹೋದ ಮೇಲೆ ಓಡೋಡಿ ಬಂದರು ಮಕ್ಕಳು ಕಣ್ಣೀರು ಹರಿಸುತ್ತಾ, ಮತ್ತೊಂದು ಭಾವಚಿತ್ರ ಈ ಗೋಡೆಯ ಮೇಲೇರಿತು ಸೊಸೆಯ ಚಿತ್ರದ ಮಗ್ಗುಲಲ್ಲಿ - ಇದಕ್ಕೂ ಗಂಧದ ಮಾಲೆ ! ಈ ಗೋಡೆ ಎಲ್ಲಕ್ಕೂ ಮೂಕ ಸಾಕ್ಷಿ - ಮುಂದೆ ಅದರ ಗತಿ ಏನೋ ! ತಂದೆ-ತಾಯಿ ಜೀವಂತವಾಗಿದ್ದಾಗ, ಅವರಿಗೆ ಆಧಾರವಾಗಿ ನಿಲ್ಲದಿದ್ದರೂ ಈಗ ಆ ಮನೆ ಎಲ್ಲರಿಗೂ ಬೇಕು. ಅವರು ಬದುಕಿರುವಾಗ ಮನೆಯ ಬಗ್ಗೆ ವಿಚಾರಿಸಲು ತಂದೆ-ತಾಯಿಯರ ಯೋಗಕ್ಷೇಮ ನೋಡಿಕೊಳ್ಳಲು ಪಾಪ ! ಯಾರಿಗೂ ಪುರುಸೊತ್ತೇ ಇರಲಿಲ್ಲ. ಈಗಿನ ಕಾಲಕ್ಕೆ ಈ ಮನೆಯ ಬೆಲೆ ಎಷ್ಟಾಗಿರಬಹುದು ಎಂಬುದೇ ಎಲ್ಲರ ಮನದಲ್ಲಿ ಯೋಚನೆ, ದುರಾಲೋಚನೆ - ದೂರಾಲೋಚೆ. ಅಂದು ಇಬ್ಭಾಗವಾಗಿ ಒಡೆದ ಮನೆ ಮೂರನೆಯ ತಲೆಮಾರು ಈಗ ಐದಾಗಬೇಕು. ಆದರೆ ಹೇಗೆ ? ದೊಡ್ಡ ಸಮಸ್ಯೆ. ಕಾದಾಡಿದರು. ಕಚ್ಚಾಡಿದರು. ವಿದ್ಯೆ, ಬುದ್ಧಿ, ಸಹೃದಯತೆ, ಪ್ರೇಮ - ಪ್ರೀತಿ ಎಲ್ಲಾ ಹಿಂದಕ್ಕೆ ಸರಿದವು. ಆಸ್ತಿ, ಮನೆ - ಇದೇ ಏಕೈಕ ಗುರಿಯಾಯಿತು. ಪಾತ್ರೆ, ವಸ್ತು, ಒಡವೆ, ಮನೆಯ ಸಾಮಾನುಗಳೆಲ್ಲಾ ಹಿಂದೆ ಇಬ್ಭಾಗವಾದದ್ದು ಈಗ ಐದಾಯಿತು. ಹಿರಿಯ ಸೊಸೆಯ ಮಕ್ಕಳೆಲ್ಲರೂ ವಿದ್ಯಾವಂತರೇ. ಆದರೆ ಹೃದಯ ಶ್ರೀಮಂತರಿರಲಿಲ್ಲ. ನಿಜಜೀವನದಲ್ಲಿ, ನಡೆ-ನುಡಿಯಲ್ಲಿ ಸುಸಂಸ್ಕೃತಿ ಕಾಣಲಿಲ್ಲ. ಆ ಗೋಡೆಗಾಗಿ ಅಣ್ಣ-ತಮ್ಮಂದಿರು ಕಚ್ಚಾಡಿದರು ಕೂಗಾಡಿದರು ಪಾಪ ! ಆ ಗೋಡೆ ಅಚಲವಾಗಿ ಮೂಕಸಾಕ್ಷಿಯಾಗಿ ನಿಂತಿತ್ತು. ಕೊನೆಗೂ ಮನೆ ಪಂಚ ಭಾಗವಾಯಿತು. ಈವರೆವಿಗೂ ಆ ಗೋಡೆಯನ್ನು ಅಲಂಕರಿಸಿದ್ದ ಎರಡು ಭಾವಚಿತ್ರಗಳು ಕೆಳಗಿಳಿಯಿತು. ಬಂದಿಳಿದರು ಗಾರೆ ಸಿಮೆಂಟು ಕೆಲಸಗಾರರು. ತಮ್ಮ ತಮ್ಮ ಪಾಲಿಗೆ ಬಂದ ಭಾಗವನ್ನು ಎಲ್ಲಾ ಮಕ್ಕಳು ಮಾಪರ್ಾಡುಗಳನ್ನು ಮಾಡಿ ಹೊಸರೂಪ ಕೊಡಬೇಕೆಂಬ ಉತ್ಸಾಹದಲ್ಲಿದ್ದರು. ಈ ಗೋಡೆಗೆ ಆ ಕಡೆ - ಈ ಕಡೆ ಎಲ್ಲಾ ಕಡೆಯಲ್ಲೂ ಬಡಿತ - ಹೊಡೆತ, ಜರ್ಝರಿತವಾಯಿತು. ಆ ಗೋಡೆಯ ಬಳಿಯಲ್ಲಿಯೇ ಸ್ನಾನ ಗೃಹ ಹಾಗೂ ಶೌಚಗೃಹ ಸೃಷ್ಟಿ ಆಯಿತು. ಹಳೆಯ ನೆನಪುಗಳು ಮುತ್ತಿಕೊಂಡು ಬರುತ್ತವೆ. ಒಂದು ಕಾಲದಲ್ಲಿ ಇದೇ ಸ್ಥಳದಲ್ಲಿ ಹವನ - ಹೋಮ ಇನ್ನೂ ಎಷ್ಟೊ ಶುಭಕಾರ್ಯಗಳು ಜರುಗಿರಲಿಲ್ಲವೇ ? ಎಲ್ಲಾ ಗತ - ವೈಭವವಾಯಿತು. ಹಳೆಯ ಕಥೆಯಂತೆ ಹಳಸಾಯಿತು. ಇದು ಮೂರು ತಲೆಮಾರಿನ ಕಥೆಯೂ ಹೌದು ! ಈ ಗೋಡೆಯ ಕಥೆಯೂ ಹೌದು ! ಈ ಕಥೆ ಎಲ್ಲೆಲ್ಲೂ ಕಂಡಿದ್ದೇವೆ, ಈಗಲೂ ಕಾಣುತ್ತೇವೆ ಅಲ್ಲವೇ ? ನಿಮಗೆ ಇದು ನೈಜ ಘಟನೆ ಎನಿಸುವುದಿಲ್ಲವೇ ? (ಬೆಂಗಳೂರು ಂ..ಖ. 1980) (ಕನ್ನಡ ನುಡಿಮುತ್ತು - ಆಗಸ್ಟ್ 1998)

No comments: