ವಸಂತನ ಆಗಮನ(ಹರಟೆ)
ಇದೇನು `ಕವಿತೆ' ಬರೆಯುತ್ತಿದ್ದೇನೆಂದು ಭಾವಿಸಿದಿರಾ ? `ಕವಿತೆ' ಬರೆಯಲು ಕಲ್ಪನೆ ಬೇಡವೇ ? ಅಲ್ಪ - ಸ್ವಲ್ಪ `ಕಲ್ಪನಾ ಸಾಮಥ್ರ್ಯ' ಇದ್ದರೂ ಕೂಡ ಈ ಬಿಸಿಲಿನ ಬೇಗೆ, ಧಗೆಯಲ್ಲಿ ಬತ್ತಿ ಹೋಗಿ, ಬಾಡಿ, ಬರಡಾಗಿ ಹೋದರೆ ಆಶ್ಚರ್ಯವೇನು ? `ವಸಂತಋತು' ಬಂತೆಂದರೆ, ಕವಿ ಮಹಾಶಯರುಗಳಿಗೆ ಎಷ್ಟು ಉತ್ಸಾಹ, ಉಲ್ಲಾಸವಾಗುತ್ತಿತ್ತು. ಒಂದಾನೊಂದು ಕಾಲದಲ್ಲಿ `ಲೇಖನ'ಗಳಿಗೆ, ಬರಹಗಳಿಗೆ, ಒಂದು ಹೊಸ ಹುರುಪು ಮೂಡುತ್ತಿತ್ತು. ಈಗ `ಬಾಂಬೆ'ಯಲ್ಲಿ `ಬೆವರು' ಮಾತ್ರ ಬರುತ್ತದೆ. ಬರೆಯಲು ಸ್ಫೂತರ್ಿ ಎಲ್ಲಿಂದ ಬರಬೇಕು ? ವಸಂತನ ಆಗಮನವಾದೊಡನೆ ಒಂದು ಕಾಲದಲ್ಲಿ ಕವಿಗಳು `ಮಾಮರವೆಲ್ಲೋ ಕೋಗಿಲೆಯೆಲ್ಲೋ.... ಏನಿದು ಸ್ನೇಹ ಸಂಬಂಧ' ಎಂದು ಹಾಡುತ್ತಿದ್ದರು. ಬಿಡಿ ! ಈಗಿನ ಕಾಲದಲ್ಲಿ ಕುಹು - ಕುಹು ಅಂಥ ಮಧುರವಾಗಿ ಹಾಡುವ `ಕೋಗಿಲೆ'ಯನ್ನು ಹುಡುಕೋದಿರಲಿ `ಮಾಮರ' ಎಲ್ಲಿ ಹುಡುಕಿಕೊಂಡು ಹೋಗ್ತೀರಿ ? ಆ `ಮಾ-ಮರ'ದಲ್ಲಿ ಮಾ ತೆಗೆದುಹಾಕಿ, ಮರ ಕೂಡ ಕಣ್ಣಿಗೆ ಬೀಳೋದು ಕಷ್ಟ ಆಗಿದೆ. ಹಿಂದಿನ ವರ್ಷದವರೆಗೆ, ಮುಂಬಯಿ ಮಾರುಕಟ್ಟೆಯಲ್ಲಿ ಸವಿಯಾದ ಸಿಹಿಯಾದ, ಬಂಗಾರದ ಬಣ್ಣದ ಮಾವಿನ ಹಣ್ಣುಗಳನ್ನು ನೋಡಿ, ಮಾಮರಗಳ ಎಲೆಗಳು ಎಲ್ಲಿಯೋ ಖಂಡಿತ ಚಿಗುರಿವೆ, ಅವುಗಳ ಕೊಂಬೆಗಳ ಮೇಲೆ ಕುಳಿತು `ಕೋಗಿಲೆ' ಗಳು ತಮ್ಮ ಮಧುರ ಕಂಠದಲ್ಲಿ `ಕುಹು - ಕುಹು' ಎಂದು ಹಾಡುತ್ತಿವೆ, ಎಂದು ಕಲ್ಪನೆಯನ್ನು ಮಾಡಿ, ಸಂತೋಷ ಪಡುತ್ತಿದ್ದೆವು. ಈ ವರ್ಷ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು (ಹೆಚ್ಚಿನ ಸಂಖ್ಯೆಯಲ್ಲಿ) ಕಂಡಿರಾ ? ಅವುಗಳ ಬೆಲೆ ಕೇಳಿಯೇ ನೀರೂರಿದ ನಾಲಿಗೆಯ ದ್ರವ ಅಲ್ಲೇ ಇಂಗಿರಬೇಕು ಅಲ್ಲವೇ ? ಮಾವಿನ ಹಣ್ಣುಗಳ ವಿಷಯ ಬಿಡಿ. `ಹಣ್ಣುಗಳ ರಾಜ' (ಏಟಿರ ಠಜಿ ಈಡಿಣಣ) ಎಂದು ಬಿರುದು ಪಡೆದುಕೊಂಡಿವೆ. ಈಗೆರೆಡು ತಿಂಗಳ ಹಿಂದೆ `ಈರುಳ್ಳಿ' ಯನ್ನು ಈಳಿಗೆ ಮಣೆಯಲ್ಲಿ ಹಚ್ಚುವ ಮೊದಲೇ, ಅಂದರೆ ಮಾರುಕಟ್ಟೆಯಲ್ಲಿ ಕೊಳ್ಳುವಾಗಲೇ, ಕಣ್ಣೀರು ಹರಿಸಿದ್ದು ನೆನಪಿಲ್ಲವೇ ? ಮಾವಿನಕಾಯಿ ಉಪ್ಪಿನಕಾಯಿ ತಯಾರಿಸಲು, ತೊಳೆದಿಟ್ಟ `ಪೀಂಗಾ', ಭರಣಿಗಳನ್ನು ಬಿಸಿಲಿನಲ್ಲಿ ಎಷ್ಟು ದಿನ ಒಣಗಿಸಿಡುತ್ತೀರಿ ? ಒಳಗೆ ತೆಗೆದಿಡಿ. ಚಕ್ರವತರ್ಿ ಅಶೋಕ, ಹರ್ಷ ಮುಂತಾದವರು ಸಾಲು ಮರಗಳನ್ನು ನೆಡಿಸುತ್ತಿದ್ದರು. ಜನಗಳು ನೆರಳಿನಲ್ಲಿ ಕುಳಿತು ಶ್ರಮ ಪರಿಹಾರ ಮಾಡಿಕೊಳ್ಳುತ್ತಿದ್ದರು. ಎಂದು ನಾವು `ಚರಿತ್ರೆ' ಪುಸ್ತಕದಲ್ಲಿ ಓದಿದ್ದ ನೆನಪಿದೆ. ಈಗ ಮರಗಳು ಎಲ್ಲೋ..... ನೆರಳು ಎಲ್ಲೋ ಎಂದು ಹಾಡಬೇಕಾಗಿದೆ. ಅದೇ ಈಗ ಹೊಸಹಾಡು. ಅರವಟ್ಟಿಗೆಗಳು ರಸ್ತೆ - ರಸ್ತೆಯಲ್ಲೂ ಇದ್ದ ಕಾಲ ಒಂದಿತ್ತು. ದಣಿದು ಬಂದವರಿಗೆ `ನೀರು ಮಜ್ಜಿಗೆ, ನಿಂಬೆ ಪಾನಕ' ನೀಡುತ್ತಿದ್ದರು. 21ನೇ ಶತಮಾನದ ಹೊಸಲಿನಲ್ಲಿ ಅಡಿ ಇರಿಸಿದಾಗಲೂ `ಇದೇನು ಇದು' ನೀರು ಮಜ್ಜಿಗೆ ನಿಂಬೆ ಪಾನಕ ಎಂದು ಹೇಳುತ್ತಿದ್ದೀರಿ ಎಂದು ಮೂಗೆಳೆಯುತ್ತಿದ್ದೀರಿ ಅಲ್ಲವೇ ? ಅದೆಲ್ಲಾ ಹಳೆ ಪದ್ಧತಿ, ಗೊಡ್ಡು ಆಚರಣೆ ಅಂತೀರೇನು. ಇದು `ಕೋ ಕೋ - ಕೋಲ' ಕಾಲ ಅಂಥ ನೀವೂ ಒಪ್ಪಿಕೊಂಡು ಬಿಟ್ಟಿರಾ ? ಮರಗಳು ಮಾಯವಾದ ಮೇಲೆ ಕಾಡು ಎಲ್ಲಿ ಉಳಿಯುತ್ತದೆ ? ಪಾಪ ! ಕೊಂಬೆಗಳು ಮೇಲೆ ಕುಳಿತು ಹಾಡುತ್ತಿದ್ದ ಕೋಗಿಲೆಗೆ, ಈಗ ಎಲ್ಲಿದೆರ ಸ್ಥಳ ? ಹಕ್ಕಿಗಳ ಚಿಲಿ - ಪಿಲಿ ನಾದ, ಕೋಗಿಲೆಯ ಮಧುರ ಧ್ವನಿ ಈಗಿನವರೆಗೆ ರುಚಿಸುವುದೇ ? ಕಿವಿಗಡಚಿಕ್ಕುವ `ಬಾರಿಸುವ' ವಾದ್ಯಗಳ ಸದ್ದು - ಗದ್ದಲಕ್ಕೆ, `ಸಂಗೀತ' ಎಂದು ಹೆಸರಿಸುವ ಜನರಿಗೆ ನಿಸರ್ಗದಲ್ಲಿನ `ನಿನಾದ' ಕೇಳಿ ಆನಂದವಾಗುವುದೇ ಎಂಬ ಸಂದೇಹ ಉಂಟಾಗುತ್ತದೆ. ಮುಂದಿನ ಪೀಳಿಗೆಯವರು, ಮಾವಿನ ಮರ, ಕೋಗಿಲೆಯ ಕುಹು - ಕುಹು ರಾಗ, ವಸಂತಋತು ಎಂದು ಕವಿಗಳು ಹಾಡುತ್ತಿದ್ದುದು ಕೇವಲ `ಕಲ್ಪನೆ' ಎಂದು ಹಿಯಾಳಿಸದೆ ನಿಜವಾಗಿಯೂ, ಹೀಗೊಂದು ಕಾಲವಿತ್ತು ಎಂದು ನಂಬುವರೇ ನೋಡೋಣ.......(ಕನ್ನಡ ನುಡಿಮುತ್ತು - ಮೇ 1998)
Saturday, April 12, 2008
Subscribe to:
Post Comments (Atom)

No comments:
Post a Comment