Friday, May 16, 2008

ಪಾದರಕ್ಷೆಗಳು.... ಅದಲು ಬದಲಾದಾಗ.

"ಪಾದರಕ್ಷೆ"ಗಳನ್ನು ಬಹಳ ಹಿಂದಿನ ಕಾಲದಿಂದಲೂ ಬಳಕೆ ಮಾಡುತ್ತಿದ್ದುದರ ಬಗ್ಗೆ ವೇದ "ಪುರಾಣ" "ರಾಮಾಯಣ", "ಮಹಾಭಾರತ"ಗಳೇ ಮುಂತಾದ ಪುರಾಣ ಪುಣ್ಯ ಕಥೆಗಳಲ್ಲಿ ಉಲ್ಲೇಖವಿದೆ. ಇವುಗಳು ಬಹಳ ಪುರಾತನವಾದ "ತೊಡುಗೆ" ಎಂದು ಹೇಳಿದರೂ ಸಹ ತಪ್ಪಾಗಲಾರದು ! ರಾಮಾಯಣದ ಆಯೋಧ್ಯಕಾಂಡದಲ್ಲಿ ಬರುವ "ಪಾದುಕಾ ಪಟ್ಟಾಭಿಷೇಕ"ದ ಪ್ರಸಂಗ ಎಲ್ಲರಿಗೂ ತಿಳಿದಿರುವಂತೆ ಬಹಳ ಪ್ರಮುಖವಾದದ್ದು ! ಭರತ, ಶತ್ರುಘ್ನವನ ರಾಮ ವನವಾಸಕ್ಕೆ ತೆರಳಿದ ನಂತರ, ರಾಜ್ಯ - ರಾಜ್ಯಾಭಾರದಲ್ಲಿ ಆಸಕ್ತಿ ಇರಿಸದೆ, ರಾಮನನ್ನು ಓಲೈಸಿ ಮರಳಿ ಅಯೋಧ್ಯಗೆ ಕರೆತರುವುದಕ್ಕಾಗಿ ಚಿತ್ರಕೂಟಕ್ಕೆ ಪ್ರಯಾಣ ಬೆಳೆಸಿದನು. ಭರತನೇ ಮೊದಲಾದವರೆಲ್ಲರೂ ಅಂಗಲಾಚಿ ಬೇಡಿದರೂ ಒಪ್ಪದ ಶ್ರೀರಾಮನು "ಪಿತೃವಾಕ್ಯ ಪರಿಪಾಲನೆಯೇ" ತನ್ನ ಧರ್ಮವೆಂದು ವಾದ ಮಾಡಿ ಕೊನೆಗೆ ಶ್ರೀರಾಮನ ಪವಿತ್ರವಾದ ಪಾದುಕೆಗಳನ್ನು ಭರತನು ಶಿರದ ಮೇಲೆ ಹೊತ್ತು ಅಯೋಧ್ಯೆಯ ಹೊರವಲಯದಲ್ಲಿದ್ದ "ನಂದಿಗ್ರಾಮ"ದಲ್ಲಿ, ಸಿಂಹಾಸನದ ಮೇಲೆ ಪ್ರತಿಷ್ಠಾಪಿಸಿ, ಶ್ರೀರಾಮನು ನ್ಯಾಸ ರೂಪದಲ್ಲಿರಿಸಿದ್ದ ರಾಜ್ಯ ಭಾರವನ್ನು ನಿರ್ವಹಿಸಿದನು. ಒಬ್ಬ ಆದರ್ಶ ರಾಜ, "ಆದರ್ಶ ತಮ್ಮ"ನ ಕಥೆಯಾಯಿತು. ಇದು ಇಂದಿಗೂ ಆದರ್ಶವಾಗಿಯೇ ಉಳಿದ ಧರ್ಮವೆನಿಸಿದೆ. "ತ್ರೇತಾಯುಗ" ಕಾಲದಲ್ಲಿ ಮರದಿಂದ ಮಾಡಲ್ಪಟ್ಟ ಪಾದುಕೆಗಳನ್ನು ತೊಡುತ್ತಿದ್ದರು. ಪಾದದ ಅಳತೆ ಆಕಾರಕ್ಕೆ ಮಾಡಲ್ಪಟ್ಟ ಮರದ ಹಲಗೆಯ ಮೇಲೆ, 1-1.5 ಇಂಚಿನ ಕಂಬದ ರೀತಿಯ ಮರದ ತುಂಡನ್ನು ಎರಡು ಕಾಲ್ಬೆರಳುಗಳ ನಡುವೆ ಸಿಕ್ಕಿಸಿಕೊಂಡು ನಡೆದಾಡುತ್ತಿದ್ದರು. ಬಹಳ ಅಭ್ಯಾಸಬೇಕು. ಹೆಜ್ಜೆ ಎತ್ತಿಡಬೇಕಾದರೆ ಎಷ್ಟು ಭಾರ ಕಾಲಿಗೆ ! ನಿಜವಾಗಿ ಕಷ್ಟಕರವಾದ ಕೆಲಸವೆಂದೇ ನನ್ನ ಅನಿಸಿಕೆ ! ಪಾಪ ! ಹಿಂದಿನ ಕಾಲದಲ್ಲಿ ಋಷಿ - ಮುನಿಗಳು ಇಷ್ಟೊಂದು ಭಾರದ ಮೆಟ್ಟುಗಳನ್ನು ಧರಿಸಿ ತ್ರಿಲೋಕ ಸಂಚಾರ ಹೇಗೆ ಕೈಗೊಳ್ಳುತ್ತಿದ್ದರೋ ಏನೋ ಆ ಪರಮಾತ್ಮನೇ ಬಲ್ಲ ! ಈಗಲೂ, ಹಲವು ಮಠಾಧಿಪತಿಗಳು, ಸ್ವಾಮೀಜಿಗಳು ಈ ಬಗೆಯ ಪಾದರಕ್ಷೆಗಳನ್ನು ತೊಡುವುದನ್ನು ನಾನು ನೋಡಿದ್ದೇನೆ. ಈಗಿನ ಮಾತು ಬಿಡಿ ! ಇವರೆಲ್ಲರಿಗೂ ವಾಹನಗಳ ಸೌಲಭ್ಯವಿರುವುದರಿಂದ ಹೆಚ್ಚು ಕಾಲ್ನಡಿಗೆಯ ಶ್ರಮ ಪಡಬೇಕಾಗಿಲ್ಲ ! ಅಂದು ಋಷಿಗಳು, ಅಷ್ಟು ದೂರದಲ್ಲಿ ನಡೆದು ಬರುತ್ತಿರುವಾಗಲೇ `ಟಕ್ - ಟಕ್' ಎಂಬ ಅವರ ಮೆಟ್ಟಿನ ಶಬ್ದ ಕೇಳಿ ಬರುತ್ತಿತ್ತು. ಇದೂ ಸಹ ಒಂದು ವಿಧದಲ್ಲಿ ಅನುಕೂಲಕರವಾಗಿತ್ತು ಎನ್ನಬಹುದು ! ಮುನಿವರ್ಯರುಗಳ ಅತಿಥ್ಯಕ್ಕೆ ಸಮಯಾವಕಾಶ ದೊರಕುತ್ತಿತ್ತು. ಅವರು ಅರಮನೆಯ ಒಳಗೆ ಬರುವಾಗಲೇ, ಸಭಾಸದರು ಎದ್ದು ನಿಂತು ನಮಸ್ಕಾರ ಮಾಡಿ, ರಾಜನು ಅರ್ಘಪಾದ್ಯಾದಿಗಳನ್ನು ನೀಡಿ ಸತ್ಕರಿಸಿ, ನಂತರವೇ ನಿಧಾನವಾಗಿ ಉಭಯ ಕುಶಲೋಪರಿ ವಿಚಾರಿಸಿ ತಿಳಿಯಬೇಕಾಗಿತ್ತು. ಈ ಕ್ರಮಬದ್ಧ ಆಚರಣೆಯಲ್ಲಿ ಏರುಪೇರಾದರೋ ದೇವರೇ ಗತಿ ! ವಿಶ್ವಾಮಿತ್ರ, ದೂರ್ವಾಸ ಮುನಿಗಳಿಗಂತೂ ಮೂಗಿನ ತುದಿಯಲ್ಲೇ ಕೋಪ ! ಅವರ ಕೋಪದ ತಾಪ ತಟ್ಟಿದರೆ ಕೆಲಸ ಕೆಟ್ಟಂತೆ ! ಆ ಕೂಡಲೇ ಶಾಪ ಕೊಡುತ್ತಿದ್ದರು ರಾಜನಾದವನಿಗೆ ಮುನಿವರ್ಯನ ಮುನಿಸನ್ನು ಶಾಂತಗೊಳಿಸಿ ಶಾಪ ವಿಮೋಚನೆಯ ಮಾರ್ಗವನ್ನು ಕೋರಿ ಕಂಡುಕೊಳ್ಳುವುದರಲ್ಲಿ ಸಾಕೋ ಸಾಕಾಗಿ ಹೋಗುತ್ತಿತ್ತು ! ಇದು ವೇದ ಉಪನಿಷತ್, ರಾಮಾಯಣ, ಮಹಾಭಾರತ ಭಾಗವತದ ಕಾಲವಾಯಿತು ಎಂದು ಭಾವಿಸೋಣ. ಅಲ್ಲಿಂದಿತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬದಲಾವಣೆಯ ಗಾಳಿ ಬೀಸಿದಂತೆ ಪಾದರಕ್ಷೆಗಳ ತಯಾರಿಕೆಯಲ್ಲೂ ಅನೇಕ ಮಾಪರ್ಾಡುಗಳಾಗಿವೆ. ಹದ ಮಾಡಿದ ಚರ್ಮ ಅಥವಾ ಚಕ್ಕಳದಿಂದ ಅಷ್ಟೇ ಏಕೆ ಪ್ಲಾಸ್ಟಿಕ್ನಿಂದ ಕೂಡ ಪಾದರಕ್ಷೆಗಳನ್ನು ತಯಾರಿಸುತ್ತಾರೆ. ಎಷ್ಟೊಂದು ವಿನ್ಯಾಸ, ವೈವಿಧ್ಯತೆ ! ಕೆಲವು ಜೋಡಿನ ಅಟ್ಟಿ (ಖಠಟಜ) ನೆಲಸಮವಾಗಿದ್ದು ಪಾದಗಳಿಗೆ ಅಂಟಿಕೊಂಡಂತೆ ಅಡ್ಡಾಡಲು ಅನುಕೂಲವಾಗಿರುತ್ತದೆ. ಕೆಲವು ಹಿಮ್ಮಡಿಗಳು ನೆಲದಿಂದ 2-3 ಇಂಚು ಎತ್ತರಕ್ಕಿದ್ದು ಧರಿಸುವವಳ, ಎತ್ತರ ಹೆಚ್ಚಿಸುವುದೇ ಅಲ್ಲದೆ ಅವಳ ನಡಿಗೆಗೆ ಒಂದು ರೀತಿಯ ಸೊಬಗು, ಲಾಸ್ಯ, ಆಕರ್ಷಣೆ ಉಂಟು ಮಾಡುತ್ತದೆ. ಹಿಂದೆ ಕವಿಗಳು ಹೆಣ್ಣಿನ ನಡಿಗೆಗೆ ಮಾರುಹೋಗಿ ಅವಳನ್ನು `ಗಜಗಮನೆ', `ಹಂಸ ಗಮನೆ' ಎಂಬ ಪದಾಲಂಕಾರಗಳನ್ನು ಬಳಸಿ ವರ್ಣನೆ ಮಾಡುತ್ತಿದ್ದರು. ಇವೆಲ್ಲಾ ಈಗಿನ ಕಾಲಕ್ಕೆ ಹಳೆಯ ಹೋಲಿಕೆಗಳೆನಿಸಿದರೆ ಆಶ್ಚರ್ಯವೇನಿಲ್ಲ ! ವಿದೇಶಿಯರು ನಮ್ಮ ದೇಶವನ್ನು ನಾವೇ ಆಳಲು ಬಿಟ್ಟು ಹೋಗಿ ಅರ್ಧಶತಮಾನವಾದರೂ ಅವರ ಕೆಲವು ನಡೆವಳಿಕೆ ರೀತಿ - ನೀತಿ, ಉಡುಗೆ ತೊಡುಗೆಗಳಿಗೆ ನಾವು ಇನ್ನೂ ಅಂಟಿಕೊಂಡಿಯೇ ಇದ್ದೇವೆ. ಅವರ "ಸೂಟು - ಬೂಟು - ಟೈ ಸಂಸ್ಕೃತಿ" ನಮ್ಮ ದೇಶದ ಹವಾಮಾನಕ್ಕೆ ಹೊಂದುವುದೇ ? ನಮ್ಮ ಚಪ್ಪಲಿಗಳು ಧರಿಸಲು ಹಾಗೂ ಕಳಚಲು ಕಷ್ಟವೇ ಇಲ್ಲ. ಅಲ್ಲವೇ ? ದೇವಸ್ಥಾನಗಳಿಗೆ, ಮದುವೆ-ಮುಂಜಿ, ಪೂಜೆ - ಪುನಸ್ಕಾರಗಳಿಗೆ ಹೋದಾಗ ನಾವು ಪಾದರಕ್ಷೆಗಳನ್ನು ಹೊರಗಡೆಯೇ ಬಿಟ್ಟು ಸಭಾಂಗಣಗಳಿಗೆ ಪ್ರವೇಶ ಮಾಡುವುದು ಪರಂಪರಾಗತವಾಗಿ ಬಂದಿರುವ ಪದ್ಧತಿ ಎಂದು ನಮ್ಮೆಲ್ಲರಿಗೂ ತಿಳಿದ ವಿಷಯವೇ ಸರಿ ! ಇತ್ತೀಚಿಗೆ ದೇವಸ್ಥಾನಗಳ ಹೊರಗಡೆ ಭಕ್ತಾದಿಗಳು ಕಳಚಿ ಬಿಟ್ಟಿರುವ ಜೋಡುಗಳನ್ನು ನೋಡಿಕೊಳ್ಳಲು, ಅಂದರೆ ಪಾದರಕ್ಷೆಗಳು ಕಳೆದು ಹೋಗದಂತೆ ರಕ್ಷಣೆ ಮಾಡಲು ವ್ಯವಸ್ಥೆ ಮಾಡಿರುತ್ತಾರೆ, ಆ ಸೇವೆಗಾಗಿ ನಾವು ಸ್ವಲ್ಪ ಹಣ ನೀಡಬೇಕಷ್ಟೇ. ಈ ಏಪರ್ಾಡು ಜಾರಿಗೆ ಬರುವ ಮೊದಲು, ನಮ್ಮ - ನಮ್ಮ ಜೋಡುಗಳ ಜವಾಬ್ದಾರಿ ನಾವೇ ಸ್ವತಃ ತೆಗೆದುಕೊಳ್ಳುತ್ತಿದ್ದ ಕಾಲದಲ್ಲಿ, ಮನ ನೆಮ್ಮದಿ ಅರಸಿ ದೇವರ ಸನ್ನಿಧಿಗೆ ಬಂದಾಗಲೂ ನಮ್ಮ ಮನ ಭಗವಂತನಲ್ಲಿ ನೆಲೆಸುವ ಬದಲಾಗಿ, ನಮ್ಮ ದೃಷ್ಟಿ ಹೊರಗೆ ಕಳಚಿಬಿಟ್ಟಿರುವ ಕಾಲಿನ ಜೋಡುಗಳ ಮೇಲೆ ಜಾರಿ ಹೋಗುತ್ತಿದ್ದ ಅನುಭವ ನಮಗೆ, ನಿಮಗೆ, ಏನು ಎಲ್ಲರಿಗೂ ಒಮ್ಮೆಯಾದರೂ ಆಗಿದೆ. ಆದರೆ ಈಗ ಸಧ್ಯ ನೆಮ್ಮದಿ ಸಿಕ್ಕಿದೆ. ಮದುವೆ - ಮುಂಜಿ, ಮಂಗಳ ಕಾರ್ಯಕ್ಕೆ ಹೋದಾಗ ಈ ಮೊದಲು, ಈ ರೀತಿಯ ಅನುಕೂಲ ಲಭ್ಯವಿಲ್ಲದೆ ಪಾದರಕ್ಷೆಗಳನ್ನು ಕಳೆದುಕೊಂಡು ಪರದಾಡಿದ್ದು ನನಗೇ ಎಷ್ಟೋ ಬಾರಿ ಅನುಭವಕ್ಕೆ ಬಂದಿದೆ. ಪಾದರಕ್ಷೆಗಳು ಪಾದಗಳನ್ನು ಬಿಟ್ಟು ಹೋದ ಮೇಲೆ ಜೇಬಿನಿಂದ ಹಣ ಹೊರಟು ಹೋಗುವುದರಲ್ಲಿ ಎಷ್ಟು ಮಹಾ ಸಮಯ ಆಗುತ್ತದೆ ? ಯಾಕೆಂದರೆ ಇಂತಹ ಸನ್ನಿವೇಶವನ್ನು "ತುತರ್ುಪರಿಸ್ಥಿತಿ" ಎಂದೇ ವಣರ್ಿಸಿ ಹೇಳಬಹುದು. ಇತ್ತೀಚಿಗೆ ಮದುವೆ ಮನೆಗಳಿಗೆ ಹೋದವರು ತಮ್ಮ ಎರಡು ಕಾಲಿನ ಚಪ್ಪಲಿಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಬಿಟ್ಟು, ಚಪ್ಪಲಿ ಚೋರರನ್ನು ಗಲಿಬಿಲಿಗೀಡು ಮಾಡಿದ್ದಾರೆಂದು ಕೇಳಿದ್ದೇನೆ. ಈ ಉಪಾಯ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆಯೋ ಯಾರಿಗೆ ಗೊತ್ತು ? ಮರೆವು ಕಾಯಿಲೆ ಇದ್ದದ್ದಾದರೆ ಮತ್ತಷ್ಟು ಮನಃಕ್ಲೇಶ. ಆ ಗಲಾಟೆಗದ್ದಲದಲ್ಲಿ ಚಪ್ಪಲಿ ಇರಿಸಿದ ಜಾಗಗಳನ್ನು ಮರೆತರೆ ಏನು ಗತಿ ! ಬಹಳ ಬಾರಿ ಚಪ್ಪಲಿ ಕಳೆದುಕೊಂಡವರ ಸೋತ ಮುಖ ಪೆಚ್ಚು ಮುಖ ನೋಡಿ ಅವರ ಸಮಾಧಾನಕ್ಕಾಗಿ ಹಲವರು ಹೇಳುವುದುಂಟು. "ಚಿಂತೆ ಮಾಡ್ಬೇಡ, ನಿನ್ನ ಮೇಲಿನ ಪೀಡೆ ಪರಿಹಾರವಾಯ್ತು" (ಗ್ರಹಚಾರ), ಪಾದರಕ್ಷೆಗಳಂತೂ ಹೋಯ್ತು. ಅದರಲ್ಲಿದ್ದ (?) ಪೀಡೆ, ಪರಿಹಾರವಾಯ್ತೋ ಇಲ್ಲವೋ ಯಾರಿಗೆ ಗೊತ್ತು ? ಪಾದರಕ್ಷೆಗಳನ್ನು ಧರಿಸದೆಯೇ ಪಟ್ಟಣಗಳ ರಸ್ತೆಗಳಲ್ಲಿ ಪಾದಚಾರಿಗಳಾಗಿ ನಡೆದಾಡಲು ಸಾಧ್ಯವೇ ? ತಂಬಾಕು - ತಾಂಬೂಲ ಮಿಶ್ರಿತ ಉಗುಳಿನ ಸಿಂಪಣೆ ರಸ್ತೆಗಳಲ್ಲೆಲ್ಲಾ ಆಗಿರುವಾಗ, ಅದರಲ್ಲಿ ವೈರಸ್, ಬ್ಯಾಕ್ಟೀರಿಯಾ ಬೀಡು ಬಿಟ್ಟಿರುವಾಗ ಚಪ್ಪಲಿ, ಇಲ್ಲದೆ ಬರೀಕಾಲಿನಲ್ಲಿ ನಡೆಯಲು ಮನಸ್ಸಾಗುವುದೇ ? ದೇಹಾರೋಗ್ಯ ಏನಾಗಬಹುದು ? ಮಳೆಗಾಲದ ನಂತರ ನಮ್ಮ ರಸ್ತೆಗಳಲ್ಲಿ ಕಂಡು ಬರುವ, ಕೊಳಚೆ ನೀರು ತುಂಬಿರುವ ಹಳ್ಳ - ಕೊಳ್ಳಗಳು ಎಷ್ಟೊಂದು ! ಟಾರು ಕೊಚ್ಚಿಹೋಗಿ ರಸ್ತೆಗಳಲ್ಲಿ ಉಳಿದ ಕಲ್ಲುಗಳ ಮೇಲೆ ಕಾಲಿಡಲು ಆಗುವುದೇ ? ಒಂದೇ - ಎರಡೇ, ಹೆಜ್ಜೆ - ಹೆಜ್ಜೆಗೂ ಅಪಾಯಗಳು ಅಡಗಿಕೊಂಡಿರುವ ರಸ್ತೆಗಳಲ್ಲಿ ಬರೀ ಕಾಲಿನಲ್ಲಿ, ಚಪ್ಪಲಿ ರಹಿತವಾಗಿ ಓಡಾಡಲು ಸಾಧ್ಯವೇ ಇಲ್ಲ. ಪಟ್ಟಣಗಳಾಗಲೀ, ಹಳ್ಳಿಯಾಗಲೀ ಪಾದಗಳಿಗೆ ಪಾದರಕ್ಷೆಗಳ ರಕ್ಷಣೆ ಅತ್ಯವಶ್ಯಕ ! ಇತ್ತೀಚೆಗೆ, ನಮ್ಮ ಕನ್ನಡ ಸಂಘದಲ್ಲಿ ಜರುಗಿದ ಒಂದು ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೂರದ (ಮುಂಬಯಿ) "ಥಾನೆ"ಯಿಂದ ಒಬ್ಬ ಆಹ್ವಾನಿತರು ಬಂದಿದ್ದರು. ಸಭೆ ಮುಗಿದ ಮೇಲೆ ಅವರು ಅವಸರದಲ್ಲಿ ಒಂದು ಕಾಲಿಗೆ ಇನ್ನೊಬ್ಬರ ಪಾದರಕ್ಷೆ ಧರಿಸಿ ಮನೆ ಮುಟ್ಟಿಯೂ ಆಯಿತು. ಕಾಲಿನಿಂದ ಕಳಚುವಾಗ ನೋಡಿ ಹೌಹಾರಿದರು ! ಇದೇನು ? ಒಂದು ತನ್ನದೇ ಹೊಸ ಚಪ್ಪಲಿ, ಮತ್ತೊಂದು ಕಾಲಿಗೆ ಬೇರೆ ಬಣ್ಣದ, ಬೇರೆ ವಿನ್ಯಾಸದ ಪಾದರಕ್ಷೆ ! ಈ ಅಚಾತುರ್ಯ ಹೇಗಾಯಿತು ? ಚಪ್ಪಲಿಗಳನ್ನು ಧರಿಸುವಾಗ ತಲೆ ಬಗ್ಗಿ ಪಾದಗಳ ಕಡೆ ಗಮನಹರಿಸಲು ಮರೆತೆನೆ ? ಒಂದು ಜೋಡನ್ನು ತೊಡುವಾಗ ಬಿಗಿಯಾಗಿದೆಯೆಂದೆನಿಸಿದರೂ ಒಂದೆರಡು ಗಂಟೆಗಳ ಕಾಲ, ಒಂದೆಡೆಯಲ್ಲೇ ಕುಳಿತಿದ್ದೆನಾದ್ದರಿಂದ ಕಾಲು ಭಾರವಾಗಿ ಬಿಗಿಯಾಗಿರಬಹುದೆಂದು ಊಹೆ ಮಾಡಿದ್ದು ತಪ್ಪಾಯಿತೇ ? ಸಮಾರಂಭ ನೋಡಿ ನಲಿದು, ಮನೆಗೆ ಹೋದ ಕೂಡಲೇ ತಮ್ಮ ಸಮಸ್ಯೆಯನ್ನು ನನ್ನಲ್ಲಿ ಹೇಳಿಕೊಂಡಿದುದೇ ಈ ಲೇಖನಕ್ಕೆ ಸ್ಫೂತರ್ಿಯಾಯಿತು. ಅವರು ಧರಿಸಿದ ಮತ್ತೊಬ್ಬರ ಜೋಡನ್ನು ಅದರ ಒಡತಿಗೆ ಹೇಗೆ ಹಿಂತಿರುಗಿಸುವುದು, ಎಂಬುದೇ ಇಲ್ಲಿ ದೊಡ್ಡ ಸಮಸ್ಯೆ ! ಆ ಮತ್ತೊಬ್ಬರು ಸಹ ತಮ್ಮ ಒಂದು ಕಾಲಿಗೆ ತನ್ನ ಸ್ವಂತ ಚಪ್ಪಲಿ ಕಾಣದೆ ಥಾನೆ ಯವರ ಒಂದು ಕಾಲಿನ ಚಪ್ಪಲಿ ಧರಿಸಿ ಮನೆಗೆ ಹೋದರೆ ? ಅಥವಾ ಮತ್ತೊಂದು ಕಾಲಿನ ಚಪ್ಪಲಿ ಹುಡುಕಿ, ಸಿಗದೆ ಒಂದೇ ಒಂದು ಚಪ್ಪಲಿ ಹಾಕಿಕೊಂಡು ಹೋದರೆ ? ಇಲ್ಲ, ಅದು ಸಾಧ್ಯವೇ ಇಲ್ಲ ! ಬಿಡಿ, ಆ ಒಂದು ಚಪ್ಪಲಿಯನ್ನು ಅಲ್ಲಿಯೇ ಬಿಟ್ಟು ಬರಿಗಾಲಿನಲ್ಲಿ ಮನೆಗೆ ಹೋದರೆ ? ಪಾಪ ! ಅವರಿಗೇನು ಗೊತ್ತು. ತಮ್ಮ ಮತ್ತೊಂದು ಕಾಲಿನ ಚಪ್ಪಲಿ, ಇನ್ನೊಬ್ಬರ ಕಾಲಿಗೆ ಸೇರಿ, `ಥಾನೆ'ಗೆ ತಲುಪಿದೆ ಎಂಬ ವಿಷಯ. "ಜೋಡು"ಗಳ ಜೋಡಿ ಅವರದವರಿಗೆ ದೊರೆಯಿತೆ ? ಸಮಸ್ಯೆಗಳು ಸುಲಲಿತವಗಿ ಬಗೆ ಹರಿದವೆ ? ಪಾದರಕ್ಷೆಗಳು ಅದಲು - ಬದಲು ಆದರೆ ಹೀಗೆಯೇ ಆಗುವುದಲ್ಲವೇ ? `ಅದಲು - ಬದಲು' ಹತ್ತಾರು ಬಾರಿ, ಬೇಗ-ಬೇಗ ಪುನರಾವೃತ್ತಿ ಮಾಡುವಾಗಲೇ ನಾಲಿಗೆ ತೊದಲಿ ಬದಲು, ಅದಲಾಗಬಹುದು. ಅಲ್ಲವೇ ಪ್ರಯತ್ನಿಸಿ, ಪರಿಹಾರ ಸೂಚಿಸಿ ಎಂದು ಕೋರುವ ವನಜಾರಾಜನ್.(ಸ್ನೇಹ ಸಂಬಂಧ - ಕನರ್ಾಟಕ ಸಂಘದ ಮಾಸಪತ್ರಿಕೆ - ಜನವರಿ 2001)

No comments: